ಪ್ರೈಮೇಟುಗಳು

ಸ್ತನಿವರ್ಗಕ್ಕೆ ಸೇರಿದ ಒಂದು ಗಣ. ಪ್ರಾಣಿ ಪ್ರಪಂಚದಲ್ಲಿ ವ್ಯಕ್ತವಾಗುವ ಕೆಲವೊಂದು ಗುಣಗಳನ್ನು ಗಮನಿಸುವಾಗ ಪ್ರೈವೇಟ್ ಪದಕ್ಕೆ ಮೊದಲಿನವು ಅಥವಾ ಪೂರ್ಣವಾಗಿ ರೂಪುಗೊಂಡವು, ಮಾನವನಿಗೆ ಹತ್ತಿರವಾದವು ಎಂಬ ಅರ್ಥಬರುತ್ತದೆ. ಸ್ವೀಡನ್ನಿನ ಸಸ್ಯವಿಜ್ಞಾನಿ ಕ್ಯರೂಲಸ್ ಲಿನೀಯಸ್ (1701-78) ಮಾಡಿರುವ ಪ್ರಾಣಿವರ್ಗೀಕರಣದಲ್ಲಿ ಮಂಗ, ವಾನರ ಮತ್ತು ಮಾನವ ಇವನ್ನು ಪ್ರೈಮೇಟುಗಣಕ್ಕೆ ಸೇರಿಸಿದ್ದಾನೆ.
 
	ಪ್ರೈಮೇಟುಗಳ ವಿಕಾಸ ಅರಿಯಲು ಅವು ಮರಗಳ ಮೇಲೆ ವಾಸಿಸಲು ಪಡೆದಿದ್ದ ವಿಶೇಷ ಸೌಕರ್ಯ-ಅಂದರೆ ಅವುಗಳ ದೇಹದಲ್ಲಿ ಪ್ರಕಟವಾಗಿದ್ದ ವಿಶಿಷ್ಟ ಹೊಂದಾಣಿಕೆ_ಏನೆಂಬುದನ್ನು ಮೊದಲು ಗಮನಿಸಬೇಕು. ಈ ಗುಣಗಳು ವಿಕಾಸಶ್ರೇಣಿಯಲ್ಲಿ ಇನ್ಸೆಕ್ಟಿವೊರಗಳಿಂದ ತೊಡಗಿ ಪ್ರೈಮೇಟುಗಳವರೆಗೆ ಅನುಸ್ಯೂತವಾಗಿ ಬೆಳೆದು ಅಭಿವರ್ಧಿಸಿವೆ ಎಂದು ಕೆಲವು ವಿದ್ವಾಂಸರು ಅಭಿಪ್ರಾಯಪಡುತ್ತಾರೆ.

	ಏಷ್ಯಖಂಡದ ಕೆಲವೆಡೆಗಳಲ್ಲಿ ಕಂಡುಬರುವ ಶ್ರೂ ಎಂಬ ಪ್ರಾಣಿಯಲ್ಲಿ ಪ್ರೈಮೇಟುಗಳ ವಿಕಾಸಪಥದ ಮುಖ್ಯ ಹಂತವನ್ನು ಪ್ರಾಣಿವಿಜ್ಞಾನಿಗಳು ಗುರುತಿಸಿದ್ದಾರೆ. ಇದರ ಹಲ್ಲು, ಬೆರಳಿನಲ್ಲಿರುವ ಪಂಜಗಳು, ಮುಖಿ ಹಾಗೂ ಶರೀರ ಇನ್ಸೆಕ್ಟಿವೊರ ವರ್ಗದ ಪ್ರಾಣಿಗಳವುಗಳಂತೆಯೇ ಇವೆ. ಆದರೆ ಶ್ರೂ ವೃಕ್ಷವಾಸಿ. ಎಂದೇ ಇದಕ್ಕೆ ಹೆಚ್ಚಿನ ಗುಣವೂ ಉಂಟು. ಇದರ ಹಿಂಗಾಲು ಮುಂಗಾಲು ಎರಡರಲ್ಲೂ ಹೆಬ್ಬೆರಳುಗಳು ಉಳಿದ ಬೆರಳುಗಳಿಗೆ ಅಭಿಮುಖವಾಗಿದ್ದು ಅವನ್ನು ಗಟ್ಟಿಯಾಗಿ ಹಿಡಿಯಬಲ್ಲವು ; ಹೀಗಾಗಿ ಇತರ ಪ್ರಾಣಿಗಳಿಗೆ ಇರದ ಗಟ್ಟಿ ಹಿಡಿತ ಎನ್ನುವ ವಿಶಿಷ್ಟಗುಣ ಶ್ರ್ರೂಗೆ ಒದಗಿದೆ. ಮರಗಳ ಮೇಲೆ ಸಂಚರಿಸಲು ಈ ಗುಣ ಅನಿವಾರ್ಯ ಆವಶ್ಯಕತೆ, ಶ್ರೂಗಳಲ್ಲಿ ಅಲ್ಲದೆ ಲೀಮರ್ ಮತ್ತು ಟಾರ್ಸಿಯಾಯ್ಡ್ ಕುಟುಂಬದ ಪ್ರಾಣಿಗಳಲ್ಲಿಯೂ ಈ ವಿಶಿಷ್ಟ ಗುಣವನ್ನು ಕಾಣಬಹುದು. ಜೀವ್ಯವಶೇಷಗಳು ಒದಗಿಸುವ ಆಧಾರಗಳನ್ನು ಗಮನಿಸಿ ಪ್ರಾಗ್ನೀವಿ ವಿಜ್ಞಾನಿಗಳು ಮಧ್ಯ ಕ್ರಿಟೇಷಸ್ ಕಾಲದ ಮುಳ್ಳುಹಂದಿ ರೀತಿಯ ಕೀಟಾಹಾರಿಯೇ ಪ್ರೈಮೇಟುಗಳ ಮೂಲವೆಂದು ಹೇಳುತ್ತಾರೆ.

	ಪ್ರಮುಖ ಲಕ್ಷಣಗಳು: ಪ್ರೈಮೆಟುಗಳಲ್ಲಿ ಪ್ರಾಜೀನ ಸ್ತನಿಗಳ ಅನೇಕ ಲಕ್ಷಣಗಳು ಉಳಿದಿವೆ. ಗಾತ್ರದಲ್ಲಿ ಮಾರ್ಮೊಸೆಟ್‍ನಿಂದ (ಇದು ಇಲಿಗಿಂತ ಕಿರಿಗಾತ್ರದ ಪ್ರೈಮೇಟ್) ದೊಡ್ಡ ಗೊರಿಲ್ಲದ ವರೆಗೆ ವೈವಿಧ್ಯವನ್ನು ಕಾಣಬಹುದು. ಕೆಲವು ಪ್ರೈಮೇಟುಗಳು ವೃಕ್ಷ ವಾಸಿಗಳಾಗಿದ್ದು ತದನುಗುಣ ದೈಹಿಕ ಲಕ್ಷಣಗಳು ಅವುಗಳಲ್ಲಿ ವಿಶೇಷವಾಗಿ ವಿಕಸಿಸಿವೆ. ಪ್ರೈಮೇಟುಗಳಿಗೆ ವ್ಯಾಪಕವಾಗಿ ಮಿದುಳನ್ನೂ ಕೈಗಳನ್ನೂ ಉಪಯೋಗಿಸಲು ಒದಗಿದ ಅವಕಾಶಗಳು ಮಾನವನ ವಿಕಾಸದ ಹಾದಿಯಲ್ಲಿ ಪ್ರಮುಖ ಪ್ರಚೋದನೆಗಳು. ಇವುಗಳ ಕಂಕಾಲ ಮತ್ತು ಸ್ನಾಯುಸಮೂಹ ಹಾರಲು, ತೂಗಾಡಲು ಮತ್ತು ಮರದ ಕೊಂಬೆಗಳನ್ನು ಹಿಡಿದುಕೊಳ್ಳಲು ಹೆಚ್ಚು ಅನುಕೂಲವಾಗುವಂತೆ ರಚಿತವಾಗಿವೆ. ಕಣ್ಣುಗಳು ಅಸ್ಥಿಗೂಡಿನಲ್ಲಿದು ಮಾಂಸಖಂಡಗಳ ಜೋಡಣೆ ಇದೆಯಾದ್ದರಿಂದ ಕಣ್ಣನ್ನು ಚುರುಕಾಗಿ ಹೊರಳಿಸುವುದು ಸಾಧ್ಯವಾಗಿದೆ. ದೃಷ್ಟಿಗೆ ಸಂಬಂಧಿಸಿದ ಅನುಕಪಾಲ (ಆಕ್ಸಿಪೀಟಲ್) ಮತ್ತು ಲಲಾಟಕ (ಫ್ರಾಂಟಲ್) ಭಾಗಗಳು ವಿಶೇಷವಾಗಿ ಬೆಳೆದಿವೆ. ಮುಂಗಾಲಿನ ಹೆಚ್ಚು ಚಟುವಟಿಕೆಗಾಗಿ ಕೊರಳಿನ ಎಲುಬು (ಗ್ರೀವಾಸ್ಥಿ) ವಿಶೇಷವಾಗಿದೆ ಮತ್ತು ದೊಡ್ಡದೂ ಆಗಿದೆ. ಕೈಕಾಲುಗಳಲ್ಲಿ ಪಂಚಾಂಗುಲೀಯ ಲಕ್ಷಣ ಉಂಟು. ಕೈಬೆರಳುಗಳಲ್ಲಿ ಹೆಬ್ಬೆರಳುಗಳ ಅಭಿಕರ್ಷಣ ಚಲನೆ ಮುಖ್ಯವಾದುದು. ಮರದ ಕೊಂಬೆಗಳನ್ನು ಗಟ್ಟಿಯಾಗಿ ಹಿಡಿದುಕೊಳ್ಳಲು ಈ ಬೆರಳು ಹೆಚ್ಚು ಸಹಾಯಕಾರಿ. ಬೆರಳುಗಳ ಮೇಲೆ ಉಗುರುಗಳಿವೆ. ದವಡೆಹಲ್ಲುಗಳು ಚತುರೇಣುರೂಪಿಗಳಾಗಿವೆ. ಎದೆ ಭಾಗದಲ್ಲಿ ಜೋಡಿ ಸ್ತನಗಳಿವೆ. ಗಂಡು ಪ್ರಾಣಿಗಳಲ್ಲಿ ಜೋಲಾಡುವ ಶಿಶ್ನವೂಚೀಲದೊಳಗೆ ಹುದುಗಿರುವ ವೃಷಣಗಳೂ ಇವೆ. ಸಂತಾನೋತ್ಪತ್ತಿ ಕ್ರಮ ಪ್ರೈಮೇಟು ಲಕ್ಷಣಗಳಲ್ಲಿಯೇ ಬಹಳ ಗಮನೀಯವಾದುದು. ಜರಾಯು ರಚನೆಗಾಗಿ ಮತ್ತು ಭ್ರೂಣದ ಸ್ವಾಗತ ತಯಾರಿಗಾಗಿ ಗರ್ಭಕೋಶದ ಪದರದಲ್ಲಿ ಬದಲಾವಣೆಗಳಾಗಿವೆ. ನಿಗದಿಯಾದ ಕಾಲದಲ್ಲಿ ಈ ಪದರಗಳು ಕಿತ್ತು ಹರಿಯುತ್ತವೆ. ಈ ವಿಶೇಷ ಲಕ್ಷಣದಿಂದಾಗಿ ಹೀಮೊಕೋರಿಯಲ್ ಜರಾಯ ರಚನೆ ಸಾಧ್ಯವಾಯಿತು. ಮರಿಗೆ ಆಹಾರ ಒದಗಿಸುವ ಈ ರಚನೆಯ ಜೊತೆಗೆ ಜನನದ ಅನಂತರ ಮರಿಗಳನ್ನು ಪಾಲಿಸುವ ಒಂದು ಕ್ರಮ ಕೂಡ ಪ್ರೈಮೇಟುಗಳಲ್ಲುಂಟು.

	ಇವುಗಳ ವಾಸ ಹೆಚ್ಚಾಗಿ ಉಷ್ಣವಲಯದಲ್ಲಿ ಭಾರತ, ಆಫ್ರಿಕ, ದಕ್ಷಿಣ ಅಮೆರಿಕ ಮುಂತಾದ ದೇಶಗಳಲ್ಲಿ ಪ್ರೈಮೇಟ್ ಗಣಕ್ಕೆ ಸೇರಿದ ಅನೇಕ ಪ್ರಾಣಿಗಳು ವಾಸಿಸುತ್ತವೆ. ಈಥಿಯೋಪಿಯದಲ್ಲಿ ಕಾಣಸಿಗುವ ಜಿಲಾಡ, ಬಬೂನ್ (ತೀರೊಪಿತೆಕಸ್) 5000 ಮೀ ಎತ್ತರದಲ್ಲಿಯೂ ವರುಂಗಾ ಜ್ವಾಲಾಮುಖಿಯ ಪ್ರದೇಶದಲ್ಲಿ ದೊರೆಯುವ ಪರ್ವತದ ಗೊರಿಲ್ಲ 4200 ಮೀ ಎತ್ತರದಲ್ಲಿಯೂ ವಾಸಿಸುತ್ತವೆ. ಹೌಲರ್ ಕೋತಿ 2500 ಮೀ ಎತ್ತರದಲ್ಲಿ ಬಾಳುತ್ತದೆ. ರೀಸಸ್ ಮಂಗಗಳು ಹೆಚ್ಚಾಗಿ ಸಮಶೀತೋಷ್ಣ ವಲಯವಾಸಿಗಳು. ಮೆಕಾಕ ಮಂಗಗಳಿಗೆ ಶೀತ ಪ್ರದೇಶಗಳಲ್ಲಿ ವಾಸಮಾಡಲು ಬೇಕಾದ ಧಾರಣಸಾಮಥ್ರ್ಯ ಉಂಟು. ಹಗಲಿನ ಬೆಳಕು, ಒಣಹವೆ ಮತ್ತು ಹಣ್ಣು ಹಂಪಲುಗಳು ಹೆಚ್ಚಾಗಿ ಬೆಳೆಯುವ ಪ್ರದೇಶವನ್ನು ಪ್ರೈಮೇಟುಗಳು ಇಚ್ಛಿಸುತ್ತವೆ.

	ಬೇರು, ಕಾಂಡ ಎಲೆ, ಹೂವು, ಹಣ್ಣು, ಬೀಜ ಇತ್ಯಾದಿ ಸಸ್ಯಾಹಾರವನ್ನೂ ಮೊಟ್ಟೆ, ಕೀಟ, ಹಲ್ಲಿ, ಪಕ್ಷಿ ಮುಂತಾದ ಮಾಂಸಾಹಾರವನ್ನೂ ಭಕ್ಷಿಸುತ್ತವೆಯಾದ್ದರಿಂದ ಪ್ರೈಮೇಟುಗಳ ಹಲ್ಲು ಮತ್ತು ಜೀರ್ಣಾಂಗಗಳು ಮಿಶ್ರಾಹಾರಕ್ಕೆ ತಕ್ಕವಾಗಿವೆ.

	ಪ್ರೈಮೇಟುಗಳಲ್ಲಿ ಲಿಂಗಭಿನ್ನತೆ ಸ್ಪಷ್ಟವಾಗಿದೆ. ಸಮಭೋಗ, ಗರ್ಭಾವಸ್ಥೆ ಜನನ ಮತ್ತು ಹಾಲೂಡುವಿಕೆ ಹಂತಗಳಿವೆ, ಗರ್ಭಾವಸ್ಥೆಯ ಅವಧಿ ಇವುಗಳಲ್ಲಿ ಭಿನ್ನವಾಗಿದೆ : ಶ್ರೂಗಳಲ್ಲಿ 41-50 ದಿವಸ, ಲೀಮರ್‍ಗಳಲ್ಲಿ 123-134 ದಿವಸ, ಚಿಂಪ್ಯಾಂಜಿ, ಗೊರಿಲ್ಲಗಳಲ್ಲಿ 250-290 ದಿವಸ ಮತ್ತು ಮನುಷ್ಯರಲ್ಲಿ 267 ದಿವಸ, ಪ್ರೈಮೇಟುಗಳಲ್ಲಿ ಶಿಶು ಬೆಳವಣಿಗೆಯ ಹಂತದಲ್ಲಿ ತಾಯಿಯನ್ನು ಅಪ್ಪಿ ಹಿಡಿದಿರುತ್ತದೆ. ಇವುಗಳ ಜೀವನ ವೈವಿಧ್ಯಮಯ. ಆಹಾರಕ್ಕಾಗಿ ಅಲೆದಾಡುವುದು ಸಾಮಾನ್ಯ ಸಂಗತಿ. ಇವುಗಳ ಜೀವನಕ್ರಮ ಆಯುಃ ಪ್ರಮಾಣವನ್ನು ನಿರ್ಧರಿಸುತ್ತದೆ. ಲೀಮರ್ 15 ವರ್ಷ, ಮಂಗ 25-30 ವರ್ಷ, ಚಿಂಪ್ಯಾಂಜಿ 40 ವರ್ಷ ಮತ್ತು ಮಾನವ 70-75 ವರ್ಷ.

	ಪ್ರೈಮೇಟುಗಳಲ್ಲಿ ಪ್ರೋಸಿಮಿಯ ಮತ್ತು ಸಿಮಿಯ ಎಂಬ ಎರಡು ಉಪಗಣಗಳಿವೆ. ಇವಕ್ಕೆ ಸೇರಿದ ಸುಮಾರು 250 ಪ್ರಭೇದಗಳನ್ನು ಸುಮಾರು 60-80 ಜಾತಿಗಳಿಗೂ ಸುಮಾರು 10 ಕುಟುಂಬಗಳಿಗೂ ಸೇರಿಸಲಾಗಿದೆ. ಪ್ರಸಕ್ತ ಲೇಖನದಲ್ಲಿ ಕುಟುಂಬಗಳ ಹಾಗೂ ಇವಕ್ಕೆ ಸೇರಿದ ಮುಖ್ಯಬಗೆಯ ಪ್ರೈಮೇಟುಗಳ ಸ್ಥೂಲ ವಿವರಣೆಯನ್ನು ಕೊಡಲಾಗಿದೆ.
	
1 ಟುಪಾಯಿಡೀ : ಇದಕ್ಕೆ ಸೇರಿದ ಪ್ರೈಮೇಟುಗಳನ್ನು ಟ್ರೀ ಶ್ರೂಸ್ ಎಂದು ಕರೆಯಲಾಗುತ್ತದೆ. ಇದರಲ್ಲಿ ಸುಮಾರು 5 ಜಾತಿ ಹಾಗೂ 15 ಪ್ರಭೇದಗಳುಂಟು. ಇವಕ್ಕೂ ಇನ್ಸೆಕ್ಟಿವೊರ ಗಣದ ಎಲಿಫೆಂಟ್ ಶ್ರೂಗಳಿಗೂ, ಮಾರ್ಸ್ಯು ಪಿಯೇಲಿಯ ಗಣದ ಕೆಲವು ಪ್ರಾಣಿಗಳಿಗೂ ರಚನಾ ಸಾದೃಶ್ಯವಿದೆ. ಬಾಹ್ಯರೂಪದಲ್ಲಿ ಇವು ಕೆಲವು ತೆರನ ಅಳಲುಗಳನ್ನು ಹೋಲುವುವು. ಅವುಗಳಿಗಿರುವಂತೆಯೇ ಇವಕ್ಕೂ ಉದ್ದ ಮೂತಿ, ಕಿರಿಯಗಲದ ಕಿವಿ, ಬಾಲ, ಬಾಗಿದ ನಖಗಳುಳ್ಳ ಬೆರಳುಗಳು ಉಂಟು. ಅಳಿಲುಗಳಂತೆಯೇ ಇವು ಕೂಡ ವೃಕ್ಷವಾಸಿಗಳು. ಓಡುವುದರಲ್ಲಿ, ಹಣ್ಣು ಕೀಟ ಮುಂತಾದ ಆಹಾರವನ್ನು ಸೇವಿಸುವಲ್ಲಿ ಸಹ ಅಳಿಲುಗಳಿಗೂ ಈ ಕುಟುಂಬದ ಸದಸ್ಯಗಳಿಗೂ ಸಾಮ್ಯ ಉಂಟು ಕೋಶವನ್ನೂ ಕೋರೆಹಲ್ಲಿನ ರೀತಿಯ ದೊಡ್ಡ ಬಾಚಿ ಹಲ್ಲುಗಳನ್ನೂ ಇವು ಪಡೆದಿವೆಯಾಗಿ ಇವೆಲ್ಲ ಲಕ್ಷಣಗಳು ಇವು ಪ್ರೈಮೇಟುಗಳೆಂಬ ವಿಚಾರವನ್ನು ಬಲಪಡಿಸುವುವು. ಉದಾಹರಣೆ : ಟುಪಾಯ ಡೆಂಡ್ರೊಗೇಲ್, ಯೂರೊಗೇಲ್, ಟೈಲೊಸರ್ಕಸ್ ಇತ್ಯಾದಿ.

	2 ಲೀಮರಿಡೀ : ಲೀಮರ್‍ಗಳೆಂದು ಕರೆಯಲಾಗುವ ಸುಮಾರು 6 ಜಾತಿ ಮತ್ತು 16 ಪ್ರಭೇದಗಳು ಈ ಕುಟುಂಬಕ್ಕೆ ಸೇರಿವೆ. ಮಲಗಸೀ (ಮ್ಯಾಡಗ್ಯಾಸ್ಕರ್) ಮತ್ತು ಕಮೊರೋ ದ್ವೀಪಗಳಿಗೆ ಇವು ಸೀಮಿತವಾಗಿವೆ. ಮಧ್ಯಮ ಗಾತ್ರದ ಇಲಿಯಿಂದ ಹಿಡಿದು ಸಣ್ಣ ನಾಯಿಯ ಗಾತ್ರಕ್ಕಿವೆ. ದೇಹ ಸಪುರ. ಮೈಮೆಲೆ ಮೃದು ಉಣ್ಣೆಯಂಥ ತುಪ್ಪಳು ಉಂಟು. ಬಾಲವೂ ತುಪ್ಪಳಿನಿಂದ ಆವೃತವಾಗಿದೆ. ಕೆಲವು ಪ್ರಭೇದಗಳಲ್ಲಿ ಮೂತಿ ಉದ್ದವಾಗಿ ನರಿಯ ಮೂತಿಯಂತಿದೆಯಾದರೆ ಇನ್ನು ಕೆಲವಲ್ಲಿ ಮೋಟಾಗಿದೆ. ಕೈರೋಗೇಲಿಯಸ್, ಮೈಕ್ರೊಸೀಬಸ್ ಮತ್ತು ಫಾನೆರ್‍ಗಳಲ್ಲಿ ಕಣ್ಣುಗಳು ದೊಡ್ಡವಾಗಿದ್ದು ಪರಸ್ಪರ ಹತ್ತಿರವಾಗಿವೆಯಾದರೆ ಹ್ಯಾಪಲೀಮರ್, ಲೆಪಿಲೀ ಮರ್ ಹಾಗೂ ಲೀಮರ್‍ಗಳಲ್ಲಿ ಇವು ಚಿಕ್ಕವು ಮತ್ತು ಪಾಶ್ರ್ವಸ್ಥ. ಮುಂಗಾಲುಗಳಿಗಿಂತ ಹಿಂಗಾಲುಗಳು ಉದ್ದ. ಈ ಗುಂಪಿನ ಪ್ರಾಣಿಗಳು ವೃಕ್ಷವಾಸಿಗಳು. ಬಹುವಾಗಿ ನಿಶಾಚರಿಗಳು.

	3 ಇಂಡ್ರೀ : ಇದು ಮೂರು ಜಾತಿಗಳನ್ನೂ (ಅವಾಹಿ, ಪ್ರೋಪಿತಿಕಸ್ ಮತ್ತು ಇಂಡ್ರೀ ನಾಲ್ಕು ಪ್ರಭೇದಗಳನ್ನೂ ಒಳಗೊಂಡಿದೆ. ಇವು ಕೂಡ ಮ್ಯಾಡ ಗ್ಯಾಸ್ಕರಿನ ಕುರುಚಲು ಮತ್ತು ದಟ್ಟಕಾಡುಗಳಿಗೆ ಸೀಮಿತವಾಗಿವೆ. ಅವಾಹಿ ಸಣ್ಣ ಗಾತ್ರದ್ದೂ ಉದ್ದ ಬಾಲವುಳ್ಳದ್ದೂ ಕಂದುಬಣ್ಣದ ಉಣ್ಣೆಯಂಥ ಕೂದಲುಳ್ಳದ್ದೂ ಅದೆಯಾದರೆ ಪ್ರೋಪಿತಿಕಸ್ ಮಧ್ಯಮಗಾತ್ರದ್ದೂ ಉದ್ದ ಬಾಲವುಳ್ಳದ್ದೂ ಬಿಳಿ ಬಣ್ಣದ ಕೂದಲುಳ್ಳದ್ದೂ ಆಗಿದೆ. ಇಂಡ್ರಿಯಾದರೊ ದೊಡ್ಡ ಗಾತ್ರದ ಪ್ರಾಣಿ. ಇದರ ಬಾಲ ಮೋಟು, ಮೈಮೇಲಿನ ತುಪ್ಪಳು ರೇಶ್ಮೆಯಂತಿದೆ. ಇವೆಲ್ಲವುಗಳ ಮೂತಿ ಮೋಟು ; ಹೆಚ್ಚು ಕಡಿಮೆ ಕೋತಿಗಳ ಮೂತಿಯಂತಿದೆ. ಕಣ್ಣುಗಳು ದೊಡ್ಡವು ; ಮುಖದ ಮುಂಭಾಗದಲ್ಲಿ ಸ್ಥಿತವಾಗಿವೆ. ಹೆಬ್ಬೆರಳು ಚಿಕ್ಕದು ; ಉಳಿದ ಬೆರಳುಗಳಿಗೆ ಸ್ವಲ್ಪವಾಗಿ ಎದುರಾಗಿದೆ. ಪಕ್ಕೆಗಳಲ್ಲಿರುವ ಚರ್ಮ ಕೊಂಚ ಹರಡಿಕೊಂಡಿದ್ದು ಪ್ಯಾರಾಶೂಟಿನ ಪಟಲದಂತಿದೆ. ಅಂಗೈ ಮತ್ತು ಅಂಗಾಲುಗಳ ಮೇಲೆ ಮೆತ್ತೆಗಳುಂಟು. ಮುಸುವ ಮತ್ತು ಕೊಲೊಬಸ್ ಕೋತಿಗಳಲ್ಲಿರುವಂತೆ ಇವುಗಳಲ್ಲೂ ಲಾಲಾಗ್ರಂಥಿಗಳು ದೊಡ್ಡವಾಗಿವೆ.

	ಅವಾಹಿಗಳು ನಿಶಾಚರಿಗಳು, ಉಳಿದವಾದರೊ ಹಗಲಿನಲ್ಲಿ ಹೆಚ್ಚು ಚಟುವಟಿಕೆಯಿಂದಿರುವುವು. ಎಲ್ಲವೂ ವೃಕ್ಷವಾಸಿಗಳು; ಪೂರ್ಣ ಸಸ್ಯಾಹಾರಿಗಳು. ಎಲೆ, ಮೊಗ್ಗು, ಕಾಯಿ, ತೊಗಟೆ, ಹೂಗಳೇ ಇವುಗಳ ಮುಖ್ಯ ಆಹಾರ. ಈ ಗುಣದಲ್ಲಿ ಇವು ಆಫ್ರಿಕ ಹಾಗೂ ಏಷ್ಯಗಳ ಪರ್ಣಭಕ್ಷಿ ಕೋತಿಗಳನ್ನೂ ಅಮೆರಿಕ ಉಷ್ಣವಲಯದ ಹೌಲರ್ ಕೋತಿಗಳನ್ನೂ ಹೋಲುತ್ತವೆ.

	4 ಲೋರಿಸಿಡೀ : ಇದರಲ್ಲಿ 6 ಜಾತಿ ಮತ್ತು 12 ಪ್ರಭೇದಗಳುಂಟು. ಮಧ್ಯ ಮತ್ತು ದಕ್ಷಿಣ ಆಫ್ರಿಕ, ದಕ್ಷಿಣ ಭಾರತ, ಶ್ರೀಲಂಕಾ, ಆಗ್ನೇಯ ಏಷ್ಯ, ಫಿಲಿಪೀನ್ಸುಗಳಲ್ಲಿ ಇವುಗಳ ವಾಸ. ಲೋರಿಸ್ (ಕಾಡುಪಾಪ), ಪೋಟೋ ಮತ್ತು ಗೆಲಾಗೋಗಳು ಈ ಕುಟುಂಬದ ಮುಖ್ಯ ಉದಾಹರಣೆಗಳು. ಸಣ್ಣ ಗಾತ್ರದ ಪ್ರಾಣಿಗಳಿವು. ತಲೆ ಹಾಗೂ ಕಣ್ಣು ಗುಂಡಗಿವೆ. ಕಿವಿಗಳು ಚಿಕ್ಕವು. ಹಿಂಗಾಲು ಮುಂಗಾಲುಗಳು ಹೆಚ್ಚುಕಡಿಮೆ ಸಮಾನ ಉದ್ದದವು. ಕೈಕಾಲುಗಳ ಹೆಬ್ಬೆರಳುಗಳು ಉಳಿದ ಬೆರಳುಗಳಿಗೆ ಎದುರಾಗಿವೆ. ಕಾಡುಪಾಪ ಹಾಗೂ ಪೋಟೋಗಳ ಕೈಕಾಲುಗಳ ಎರಡನೆಯ ಬೆರಳಿನಲ್ಲಿ ಮೊನೆಯುಗುರು (ಕ್ಲಾ) ಇದೆಯಾದರೆ, ಉಳಿದ ಬೆರಳುಗಳಲ್ಲಿ ಚಪ್ಪಟೆ ಉಗುರುಗಳುಂಟು.

	ಇವು ವೃಕ್ಷವಾಸಿಗಳು ಹಾಗೂ ನಿಶಾಚರಿಗಳು. ಉಚ್ಚೆಹೊಯ್ದುಕೊಂಡು ಕೈತೊಳೆದುಕೊಳ್ಳುವ ವಿಲಕ್ಷಣ ಗುಣವನ್ನು ಇವು ತೋರುತ್ತವೆ. ಇವು ಕೀಟಗಳನ್ನೂ ಮಾಂಸವನ್ನೂ ತಿನ್ನುತ್ತವೆ. ಕಾಡುಪಾಪ ಹಾಗೂ ಪೋಟೋಗಳಲ್ಲಿ ಬಾಲ ತುಂಬ ಚಿಕ್ಕದು ಅಥವಾ ಇಲ್ಲವೇ ಇಲ್ಲ. ಗೆಲಾಗೋಗಳ ಬಾಲ ಉದ್ದವಾಗಿದೆ.

	5 ಟಾರ್ಸಿಯಿಡೀ : ಟಾರ್ಸಿಯಸ್ ಎಂಬ ಒಂದೇ ಜಾತಿಯನ್ನು ಇದು ಒಳಗೊಂಡಿದೆ. ಸುಮಾತ್ರ, ಬೋರ್ನಿಯೊ, ಫಿಲಿಪೀನ್ಸ್‍ಗಳ ಕುರುಚಲು ಜಕಾಡುಗಳ ಕೆಳ ಉನ್ನತಿಗಳಲ್ಲಿ ಇದರ ಮೂರು ಪ್ರಭೇದಗಳು ಕಾಣದೊರೆಯುತ್ತವೆ. ಚಿಕ್ಕಗಾತ್ರದ ಪ್ರಾಣಿಗಳಿವು. ಮೈ ಬಣ್ಣ ಬೂದುಮಿಶ್ರಿತ ಕಂದು ಇಲ್ಲವೆ ಗಾಢಕಂದು. ಚೇಹದ ಉದ್ದಕ್ಕಿಂತ ಹೆಚ್ಚು ಉದ್ದದ ಬಾಲವುಂಟು. ಬಾಲದ ತುದಿಯಲ್ಲಿ ಮಾತ್ರ ಕೂದಲಿನ ಗುಚ್ಛವಿದೆ. ಮೈಮೇಲೆ ರೇಶ್ಮೆಯಂಥ ಕೂದಲುಂಟು. ಇವುಗಳ ಅತ್ಯಂತ ಪ್ರಧಾನ ಲಕ್ಷಣವೆಂದರೆ ತುಂಬ ಅಗಲವಾದ ಕಣ್ಣುಗಳು. ಕಣ್ಣಿನ ಗುಡ್ಡೆಯ ವ್ಯಾಸ ಸುಮಾರು 16 ಮಿಮೀ ಇದೆ. ಮುಂಗಾಲುಗಳಿಗಿಂತ ಹಿಂಗಾಲುಗಳು ವಿಪರೀತ ಉದ್ದ. ಎರಡು ಮತ್ತು ಮೂರನೆಯ ಬೆರಳುಗಳ ಉಗುರುಗಳು ಮೊನೆಚಾಗಿವೆ. ಉಳಿದವಲ್ಲಿ ಚಪ್ಪಟೆ ಉಗುರುಗಳಿವೆ.

	ಇವು ಕೂಡ ವೃಕ್ಷವಾಸಿಗಳು ಹಾಗೂ ನಿಶಾಚರಿಗಳು. ಕೀಟ, ಹಲ್ಲಿ, ಓತಿ ಮುಂತಾದವನ್ನು ತಿಂದು ಇವು ಜೀವಿಸುವುವು. ಟಾರ್ಸಿಯರುಗಳು ತಮ್ಮ ತಲೆಯನ್ನು 3600 ಗಳಷ್ಟು ತಿರುಗಿಸಬಲ್ಲವಾದ್ದರಿಂದ ಹೆಚ್ಚಿನ ದೃಗ್ವಿಸ್ತಾರ ಇವಕ್ಕೆ ಲಭಿಸಿದೆ.

	6 ಸೆಬಿಡೀ : ನೂತನ ಲೋಕದ (ನ್ಯೂವಲ್ರ್ಡ್) ಕೋತಿಗಳೆಂದು ಕರೆಯಲಾಗುವ ಸುಮಾರು 12 ಜಾತಿಗಳೂ 37 ಪ್ರಭೇದಗಳೂ ಇದಕ್ಕೆ ಸೇರಿವೆ. ಮೆಕ್ಸಿಕೋದ 230 ಉತ್ತರ ಅಕ್ಷಾಂಶದಿಂದ ಹಿಡಿದು ಅರ್ಜೆಂಟೀನದ 270 ದಕ್ಷಿಣ ಅಕ್ಷಾಂಶದ ವರೆಗಿನ ದಟ್ಟಕಾಡುಗಳಲ್ಲಿ ಇವು ವಾಸಿಸುವುವು. ಇವುಗಳ ಪೈಕಿ ಮುಖ್ಯ ಬಗೆಗಳು ಇಂತಿವೆ : ಟಿಟಿ ಕೋತಿ, ಉಕಾರಿ ಕೋತಿ, ಜೇಡಕೋತಿ, ವುಲಿ ಕೋತಿ, ಮತ್ತು ಗೆಲ್ಡೀ ಮಾರ್ಮೊಸೆಟ್. ಮಧ್ಯಮಗಾತ್ರದ ಕೋತಿಗಳಿವು ; ದೇಹದ ಉದ್ದ ಮಾರ್ಮೊ ಸೆಟ್ಟಿನಲ್ಲಿ ಸುಮಾರು 200 ಮಿಮೀ ಇದೆಯಾದರೆ ಹೌಲರ್ ಕೋತಿಗಳಲ್ಲಿ 600-900 ಮಿಮೀ ಇದೆ. ಇವೆಲ್ಲಕ್ಕೂ ಉದ್ದಬಾಲ ಉಂಟು. ಹೌಲರ್, ಜೇಡ, ಹಾಗೂ ವುಲಿ ಕೋತಿಗಳಲ್ಲಿ ಬಾಲಕ್ಕೆ ಹಿಡಿದುಕೊಳ್ಳುವ ಸಾಮಥ್ರ್ಯವುಂಟು. ಇದಕ್ಕಾಗಿ ಬಾಲದ ತುದಿ ಮೃದು ಹಾಗೂ ರೋಮರಹಿತವಾಗಿದ್ದು ಸ್ಪರ್ಶಸಂವೇದಿಯಾಗಿದೆ. ಬಾಲವನ್ನು ಇವು ಮೂರನೆಯ ಕೈಯಾಗಿ ಬಳಸುವುವು. ಇವುಗಳ ನಾಸಿಕರಂಧ್ರಗಳು ಪರಸ್ಪರ ದೂರವಾಗಿದ್ದು ಪಾಶ್ರ್ವಗಳೆಡೆಗೆ ಹೊರತೆರೆಯುವುದರಿಂದ ಈ ಕೋತಿಗಳನ್ನು ಪ್ಲಾಟಿ ರೈನ್ ಕೋತಿಗಳೆಂದು ಕರೆಯುವುದಿದೆ. [ಪ್ರಾಚೀನಲೋಕದ ಕೋತಿಗಳ (ಓಲ್ಡ್ ವಲ್ರ್ಡ್ ಮಂಕೀಸ್) ನಾಸಿಕರಂಧ್ರಗಳಾದರೊ ಪರಸ್ಪರ ಹತ್ತಿರವಿದ್ದು ಮೂತಿಯ ಮುಂಭಾಗದಡೆಗೆ ಹೊರತೆರೆಯುವುವು. ಆದ್ದರಿಂದ ಈ ಕೋತಿಗಳನ್ನು ಕ್ಯಾಟರೈನ್ ಕೋತಿಗಳು ಎಂದು ಕರೆಯಲಾಗುತ್ತದೆ]. ಸೆಬಿಡೀ ಕೋತಿಗಳ ಕಣ್ಣುಗಳು ದೊಡ್ಡವು, ಚೆನ್ನಾಗಿ ರೂಪುಗೊಂಡ ರೆಪ್ಪೆಗಳನ್ನು ಪಡೆದಿವೆ. ಅಯೋಟಸ್ ಎಂಬ ಹೆಸರಿನ ಕೋತಿಯ ವಿನಾ ಉಳಿದವುಗಳ ಕಣ್ಣಿನ ಕಣ್ಜಾಲದಲ್ಲಿ (ರೆಟೀನ) ಸಲಾಕಿಗಳು (ರಾಡ್ಸ್) ಮತ್ತು ಶಂಕುಗಳು (ಕೋನ್ಸ್) ಇವೆ. ಈ ಲಕ್ಷಣದಲ್ಲಿ ಈ ಕೋತಿಗಳು ಮನುಷ್ಯನನ್ನು ಹೋಲುವುವು. ಅಯೋಟಸ್ ಕೋತಿಯಲ್ಲಿ ಬರಿಯ ಸಲಾಕಿಗಳುಂಟು. ಇವುಗಳಲ್ಲಿ ಕೆನ್ನೆ ಸಂಚಿಗಳಾಗಲೀ ಪೃಷ್ಠಭಾಗದ ಜಡ್ಡುಗಟ್ಟಿದ ಜರ್ಮವಾಗಲೀ (ಕ್ಯಾಲೋಸಿಟೀಸ್) ಇಲ್ಲ. (ಪ್ರಾಚೀನ ಲೋಕದ ಕೋತಿಗಳಲ್ಲಿ ಈ ಅಂಗಗಳುಂಟು) ಕೈಯ ಹಬ್ಬೆರಳು ಅಭಿಕರ್ಷಕವಾಗಿಲ್ಲ. ಆದರೆ ಕಾಲಿನ ಹೆಬ್ಬೆರಳು ಅಭಿಕರ್ಷಕ. ಸೆಬಿಡೀ ಕೋತಿಗಳು ವೃಕ್ಷವಾಸಿಗಳು. ತುಂಬ ಚುರುಕಾಗಿ ಮರದಿಂದ ಮರಕ್ಕೆ ಜಿಗಿಯುತ್ತ ನಡೆದಾಡುವುವು.

	ಇವು ಸಣ್ಣ ಸಣ್ಣ ಸಮುದಾಯಗಳಲ್ಲಿ ವಾಸಿಸುತ್ತವೆ. ಹೆಚ್ಚಿನ ಬಗೆಗಳು ಸಸ್ಯಾಹಾರಿಗಳು. ಕೆಲವು ಮಾತ್ರ ಕೀಟ ಇತ್ಯಾದಿ ಮಾಂಸಾಹಾರವನ್ನೂ ಸೇವಿಸುವುವು.

	7 ಕ್ಯಾಲಿತ್ರಿಸಿಡೀ : ಕ್ಯಾಲಿತ್ರಿಕ್ಸ್ (ಮಾರ್ಮೊಸೆಟ್), ಸೆಬುಯೆಲ (ಪಿಗ್ಮಿ ಮಾರ್ಮೊಸೆಟ್); ಸ್ಯಾಗ್ವೀನಸ್ (ಟ್ಯಾಮರಿನ್) ಮತ್ತು ಲಿಯೊನ್ಟಿಡಿಯಸ್ (ಸಿಂಹಬಾಲದ ಮಾರ್ಮೊಸೆಟ್) ಎಂಬ ನಾಲ್ಕು ಜಾತಿಗಳು ಈ ಕುಟುಂಬಕ್ಕೆ ಸೇರಿವೆ. ದಕ್ಷಿಣ ಅಮೆರಿಕ ಮತ್ತು ಪನಾಮಗಳ ಉಷ್ಣವಲಯ ಕಾಡುಗಳೇ ಇವುಗಳ ಆವಾಸಸ್ಥಾನ, ಪ್ರೈಮೇಟುಗಳಲ್ಲೆಲ್ಲ ಮಾರ್ಮೊಸೆಟ್ಟುಗಳೇ ಅತ್ಯಂತ ಕಿರಿಗಾತ್ರದವು ; ದೇಹ 130-170 ಮಿಮೀ, ಉದ್ದವಿರುತ್ತದೆ. ತೂಕ 70-1000 ಗ್ರಾಮ್. ಮೈಮೇಲಿನ ಕೂದಲು ದಟ್ಟ ಹಾಗೂ ರೇಶ್ಮೆಯಂತೆ ಮೃದು ತಲೆಯ ಮೇಲೆ ಕೂದಲಿನ ಕುಚ್ಚು ಇರುವುದುಂಟು. ಬಾಲಕ್ಕೆ ಹಿಡಿದುಕೊಳ್ಳುವ ಸಾಮಥ್ರ್ಯ ಇಲ್ಲ. ಹೆಬ್ಬೆರಳು ಅಭಿಕರ್ಷಕವಲ್ಲ.

	ಇವಕ್ಕೆ ಚುರುಕಾದ ದೃಷ್ಟಿ ಹಾಗೂ ಶ್ರವಣ ಸಾಮಥ್ರ್ಯ ಉಂಟು. ಇವುಗಳ ಚಟುವಟಿಕೆ ಹಗಲಿನಲ್ಲಿ ಹೆಚ್ಚು. ಇವು ಕೂಡ ವೃಕ್ಷವಾಸಿಗಳು. ಎಲ್ಲ ರೀತಿಯ ಆಹಾರವನ್ನು ಇವು ಸೇವಿಸುವುವಾದರೂ ಕೀಟ, ಜೇಡ, ಕಾಯಿಗಳು ಇವುಗಳ ಮೆಚ್ಚಿನ ಆಹಾರ.

	8 ಸರ್ಕೊಪಿತಿಸಿಡೀ : ಪ್ರಾಚೀನ ಲೋಕದ ಕೋತಿಗಳೆಂದು ಪ್ರಸಿದ್ದವಾಗಿರುವ ಬೆಬೂನ್, ಮಂಗ, ಮುಸುವ, ರೀಸಸ್ ಕೋತಿ, ಬಾರ್ಬೆರಿವಾನರ, ಮಂಗಾಬೀ, ಮ್ಯಾಂಡ್ರಿಲ್, ಸೊಂಡಿಲು ಕೋತಿ, ಗರೆಜ ಕೋತಿ, ಇತ್ಯಾದಿ ಸುಮಾರು 16 ಜಾತಿಯ 60 ಪ್ರಭೇದಗಳು ಈ ಕುಟುಂಬದ ಸದಸ್ಯಗಳು. ಆಫ್ರಿಕ, ಅರೇಬಿಯ, ದಕ್ಷಿಣ ಏಷ್ಯ, ಇಂಡೊನೇಷ್ಯ ಪ್ರದೇಶ, ಫಿಲಿಪೀನ್ಸ್, ಜಪಾನ್_ಇವು ಈ ಕೋತಿಗಳ ಮುಖ್ಯ ನೆಲೆಗಳು. ದಟ್ಟ ಕಾಡುಗಳಿಂದ ಹಿಡಿದು ಶಿಲಾಮಯ ಬಂಜರುಗಳ ವರೆಗಿನ ಎಲ್ಲ ರೀತಿಯ ಪ್ರದೇಶಗಳಲ್ಲಿ ಇವು ವಾಸಿಸುತ್ತವೆ. ಮಧ್ಯಮ ಗಾತ್ರದ ಕೋತಿಗಳಿವು; ದೇಹದ ಉದ್ದ 325-1100 ಮಿಮೀ. ತೂಕ 50 ಕೆಜಿಯಷ್ಟು ಭಾರವಾಗಿರುವುದುಂಟು (ಉದಾ : ಮ್ಯಾಂಡ್ರಿಲ್). ಬಾಲಕ್ಕೆ ಹಿಡಿದುಕೊಳ್ಳುವಲ್ಲಿ ಸಹಾಯಕವಾಗಿದೆ. ಮೈಮೇಲಿನ ಕೂದಲು ಉದ್ದವಾಗಿರಬಹುದು ಇಲ್ಲವೆ ಮೋಟಾಗಿರಬಹುದು. ಕೆಲವಲ್ಲಿ ಜೂಲು, ಗಡ್ಡ, ಶಿಖೆ ಮುಂತಾದ ಅಲಂಕರಣಗಳಿರುತ್ತವೆ. ಮುಖ ಸಾಮಾನ್ಯವಾಗಿ ರೋಮರಹಿತ ಮತ್ತು ಕರಿಯ ಬಣ್ಣದ್ದು. ಮ್ಯಾಂಡ್ರಿಲುಗಳ ಗಂಡುಗಳಲ್ಲಿ ಮಾತ್ರ ಮುಖ ಉಜ್ಜ್ವಲ ಕೆಂಪು, ನೀಲಿ ಮತ್ತು ಊದಾ ಬಣ್ಣಗಳ ಪಟ್ಟೆಗಳಿಂದ ಕೂಡಿದ್ದು ಬಲುವರ್ಣರಂಜಿತವಾಗಿದೆ. ಅಂಗಾಲು ಅಂಗೈಗಳು ರೋಮರಹಿತ. ಕೆಲವು ಪ್ರಭೇದಗಳಲ್ಲಿ ಪೃಷ್ಠದ ಮೇಲೆ ವರ್ಣಮಯ ಜಡ್ಡುಗಂಟು (ಕ್ಯಾಲೋಸಿಟಿ) ಉಂಟು. ಹಿಂದೆ ತಿಳಿಸಿದಂತೆ ಇವು ಕ್ಯಾಟರೈನ್ ಕೋತಿಗಳು.

	ಇವಕ್ಕೆ ಚೆನ್ನಾದ ದೃಷ್ಟಿ ಶ್ರವಣ ಹಾಗೂ ಘ್ರಾಣ ಸಾಮಥ್ರ್ಯ ಉಂಟು. ಇವೆಲ್ಲವುಗಳ ಚಟುವಟಿಕೆ ಹಗಲಿಗೆ ಸೀಮಿತವಾಗಿದೆ. ಬೆಬೂನ್‍ಗಳು ನೆಲವಾಸಿಗಳಾದರೆ ಉಳಿದವು ವೃಕ್ಷವಾಸಿಗಳು. ಇವುಗಳಲ್ಲಿ ಕುಟುಂಬ ಜೀವನ ಬಲುಸಾಮಾನ್ಯ. ಕೆಲವು ಬಗೆಗಳು ದೊಡ್ಡ ಸಮುದಾಯಗಳಲ್ಲಿ ಜೀವಿಸುವುವು. ಮುಸುವ, ಕೊಲೊಬಸ್ ಕೋತಿ ಮತ್ತು ಸೊಂಡಿಲು ಕೋತಿಗಳು ಸಸ್ಯಹಾರಿಗಳಾದರೆ ಉಳಿದವು (ಮಂಗ, ಮಂಗಾಬಿ, ಗ್ವೆನೋನ್, ಬೆಬೂನ್ ಇತ್ಯಾದಿ) ಸರ್ವಭಕ್ಷಿಗಳು.

	ಈ ಕುಟುಂಬದ ಸದಸ್ಯಗಳ ಹೆಣ್ಣುಗಳಲ್ಲಿ 27-52 ದಿವಸಗಳ ಋತುಚಕ್ರ ಉಂಟು. ಗರ್ಭಾವಸ್ಥೆಯ ಅವಧಿ 5-9 ತಿಂಗಳು. ಇವುಗಳ ಆಯಸ್ಸು 20-25 ವರ್ಷಗಳು.

	9 ಪಾಂಗಿಡೀ : ಗಿಬನ್, ಒರಾಂಗೂಟಾನ್, ಚಿಂಪ್ಯಾಂಜಿ ಮತ್ತು ಗೊರಿಲ್ಲಗಳನ್ನು ಇದು ಒಳಗೊಂಡಿದೆ. ಇವೆಲ್ಲಕ್ಕೂ ವಾನರಗಳೆಂಬ (ಬಾಲವಿಲ್ಲದ ಕಪಿಗಳು, ಏಪ್ಸ್) ಹೆಸರುಂಟು. ಮಾನವನಿಗೆ ಬಲು ಹತ್ತಿರದ ಸಂಬಂಧಿಗಳಿವು. ಆಫ್ರಿಕ- ಆಗ್ನೇಯ, ಏಷ್ಯ, ಸುಮಾತ್ರ, ಜಾವ, ಬೋರ್ನಿಯೋಗಳು ಇವುಗಳ ಪ್ರಧಾನ ಆವಾಸಸ್ಥಾನಗಳು ; ಅಲ್ಲಿಯ ದಟ್ಟ ಕಾಡುಗಳಲ್ಲಿ ಇವು ವಾಸಿಸುವುವು. ಇವುಗಳ ವಿವರಗಳಿಗೆ ಆಯಾ ಶೀರ್ಷಿಕೆಗಳನ್ನು ನೋಡಬಹುದು.

	10 ಹೋಮಿನಿಡೀ : ಮಾನವ (ಹೋಮೊ) ಜಾತಿಯನ್ನು ಮಾತ್ರ ಇದು ಒಳಗೊಂಡಿದೆ.

	ಇತರ ಪ್ರಾಣಿಗಳಿಗಿಂತ ಮಂಗಗಳಿಗೆ ಹೆಚ್ಚುಬುದ್ದಿಶಕ್ತಿ ಇದೆಯೆಂದು ಅವನ್ನು ಕೆಲವು ದೇಶಗಳಲ್ಲಿ ಮುದ್ದು ಪ್ರಾಣಿಗಳಾಗಿ ಸಾಕುವುದುಂಟು. ಸಂಗಾತಿಯಂತೆ ಪ್ರೀತಿಮಾಡುವುದೂ ಉಂಟು. ಮಂಗಗಳು ಮಾನವ ಸದೃಶಪ್ರಕ್ರಿಯೆಗಳನ್ನು ಪ್ರದರ್ಶಿಸುವುದರಿಂದ ಅವನ್ನು ಸಂಶೋಧನೆಗೆ ಮಾನವನ ಬದಲು ಬಳಸುವುದುಂಟು. 
(ಟಿ.ವಿ.ಎಜ್‍ಎ.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ